ಅಕ್ಕನ ಕಾಡಿನಲ್ಲಿ ಸ್ವಗತ…..

ಚಿಲಿಮಿಲಿ ಎಂದೋದುವ ಗಿಳಿಗಳನ್ನು, ಸ್ವರವೆತ್ತಿ ಪಾಡುವ ಕೋಗಿಲೆಗಳನ್ನು, ಎರಗಿ ಬಂದು ಆಡುವ ದುಂಬಿಗಳನ್ನು – “ನೀವು ಕಾಣಿರೇ? ನೀವು ಕಾಣಿರೇ?” ಎಂದು ಬೇಡುತ್ತ, ನಿನ್ನ ಗಂಡನಾದ ಚೆನ್ನಮಲ್ಲಿಕಾರ್ಜುನನನ್ನು ಅರಸಿ ಹೊರಟವಳು ಅಲ್ಲವೆ ನೀನು? ಎಲ್ಲಿಯ ಉಡುತಡಿ, ಎಲ್ಲಿಯ ಶ್ರೀಶೈಲ!  ಬೆಂಗಳೂರಿನಿಂದ ೫೦೦ ಕಿ.ಮಿ ಕ್ರಮಿಸುವುದರಲ್ಲಿ ಹದಗೆಟ್ಟ ನಮ್ಮ ಸ್ಥಿತಿ ಎಲ್ಲಿ? ೮೦೦ ವರ್ಷಗಳ ಹಿಂದೆ, ನೀನು ಕ್ರಮಿಸಿದ ಈ ಹಾದಿ ಎಲ್ಲಿ?  ನೀನು ನಿಜವಾಗಿಯೂ ಮಾನವ ಮಾತ್ರಳೇ? ಅಲ್ಲಮನ ಎದುರಿಗೆ, ಅಷ್ಟು ಶರಣರ ಸಮ್ಮುಖದಲ್ಲಿ ದಿಟ್ಟವಾಗಿ ಉತ್ತರಿಸಿ, ನಿನ್ನ ವೈರಾಗ್ಯದ ಅನಿಮಿತ ಪರಿಧಿಯ ದರ್ಶನ ಮಾತ್ರವನ್ನು ಮಾಡಿಸಿದೆಯಲ್ಲವೆ ನೀನು? “ನಮ್ಮ ಗುಹೇಶ್ವರ ಲಿಂಗದಲ್ಲಿ ಸಂದಿಲ್ಲದಿಪ್ಪ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು” ಎಂದೆನಿಸಿದೆ – ಅಲ್ಲಮನಿಂದ! ಅಲ್ಲಮನ ವೈರಾಗ್ಯ, ಬಸವಣ್ಣನ ಭಕ್ತಿ – ಸ್ತ್ರೀ ರೂಪದಲ್ಲಿ ಏಕೀಭವಿಸಿ ಉದಿಸಿದ ಮೂರ್ತಿ ನೀನಲ್ಲವೆ?

ಅದನ್ನು ತೋರ್ಪಡಿಸಲೆಂದೇ ಅಲ್ಲಮನು ಏನೆಲ್ಲ ಪ್ರಶ್ನೆಗಳನ್ನು ಹಾಕಿದ! ಏಕೆ? ರಾಜನ ಹಂಗನ್ನು ತೊರೆದು, ಸಮಾಜದ ಮರ್ಯಾದೆಯ ಕಟ್ಟಳೆಗಳನ್ನು ಮೀರಿ, ಉಟ್ಟ ವಸ್ತ್ರವನ್ನೇ ತೊರೆದು, ನಡೆದ ನಿನ್ನ ಪರಿಯಲ್ಲಿ ವೈರಾಗ್ಯ ತಾನೇತಾನಾಗಿ ಕಾಣಲಿಲ್ಲವೆ?  ಅದರಲ್ಲಿ ಛಲವಿರ ಬಹುದೆಂಬ ಗುಮಾನಿಯೆ ಅಲ್ಲಮನಿಗೆ?  ಛಲವಿರದ ಭಕ್ತಿಯುಂಟೆ ಅಕ್ಕ? ನೀನು ನಡೆದ ಆ ಹಾದಿಯಲ್ಲಿ ಈಗಿನ ಐಷಾರಾಮಿನ ಸವಾರಿಯಿರಲಿಲ್ಲ. ಅಲ್ಲವೆ? ನಾವು ದೋಣಿಯಲ್ಲಿ ಕುಳಿತು, ಸರಾಗವಾಗಿ ಬಂದು ಕದಳಿಯ ಬನ ಸೇರಿದ ರೀತಿ, ನೀನು ಬರಲಿಲ್ಲ.  

ಅಕ್ಕ ಮಹಾದೇವಿ

ಅಕ್ಕ ಮಹಾದೇವಿ

ಆ ಕಾಲ ಘಟ್ಟದಲ್ಲಿ, ನಿನ್ನ ಚೆನ್ನಮಲ್ಲಿಕಾರ್ಜುನನ ಇರವು, ಈಗಿನಂತಿರಲಿಕ್ಕಿಲ್ಲ.  ಇಲ್ಲಿನ ಅದಾವ ಗುಹೆಗಳಲ್ಲಿ ನೀನು ಅವನನ್ನು ಅರಸಿ, ಕಡೆಯಲ್ಲಿ ಅವನರಸಿಯಾದೆಯೊ!  ಕಂಡವರಾರು?!! ಅಂಗ ಲಿಂಗ ಸಂಗವನನುಭವಿಸಿದವಳು ನೀನಲ್ಲವೆ? ಸೂರ್ಯನ ಕಂಡ ಕಣ್ಣು ಮಿಂಚುಹುಳುವಿಗೆ ಮಾರು ಹೋಗುವುದೆ?  ಭವನನ್ನು ಕಂಡ ನಿನಗೆ, ಭವಿಗಳ ಸಂಗವೇಕೆ ಬೇಕಿತ್ತು? ಬಹುಶಃ ಅದಕ್ಕೆಂದೇ, ಇಷ್ಟು ಕಠಿಣವಾದ ಹಾದಿಯಲ್ಲಿ ಬಂದು, ನಿಬಿಡವಾದ ಅರಣ್ಯದಲ್ಲಿ ನೆಲೆಸಿ, ನಿನ್ನ ಮಲ್ಲಿಕಾರ್ಜುನನ ಜೊತೆ ಲೀನಳಾದೆ. ನಿನ್ನ ಆ ಅಗಾಧವಾದ ಭಕ್ತಿಯ ತುಣುಕೊಂದನ್ನು ನನಗೆ ದಯಪಾಲಿಸುವೆಯಾ?  ಈಗಿನ ದಿನಗಳಲ್ಲಿ, ಅಷ್ಟು ಮಾತ್ರದ ಭಕ್ತಿಯನ್ನು ನಿಭಾಯಿಸುವುದೂ ಒಂದು ಮಹತ್ಕಾರ್ಯವೇ ಸರಿ.  ನಿನ್ನ ಶ್ರೀಶೈಲವನ್ನು ನೀನು ಈಗ ಕಂಡಿರಬೇಕಿತ್ತು.  ಕದಳಿಯನ್ನು ಬಿಟ್ಟು ಇನ್ನೆಲ್ಲಿಗೆ ಹೋಗುತ್ತಿದ್ದೆಯೊ ಯಾರಿಗೆ ಗೊತ್ತು!

ನೀನು ಕಂಡ ಕಾಡು ಈಗ ಇಲ್ಲಿಲ್ಲ! ನಮ್ಮ ಸ್ವಾರ್ಥಕ್ಕೆ, ದೇವರನ್ನೇ ಮಾರುವ ನಾವು ಕಾಡನ್ನು ಕಾಪಾಡುತ್ತೇವೆಯೆ?  ಆದರೆ ನಿನ್ನ ಮಹಿಮೆಯಿಂದ ದುಡ್ಡು ಸಂಪಾದಿಸಲು ಮಾತ್ರ ಬೇಕಾಗುವಷ್ಟನ್ನು ಉಳಿಸಿಕೊಂಡಿದ್ದೇವೆ! ಅದಕ್ಕೆಂದೇ, ಈಗ ದೋಣಿಯಲ್ಲಿ ಎಷ್ಟೋ ಜನರನ್ನು, ನೀನು ತಪಸ್ಸು ಗೈದಿರಬಹುದಾದ ಗುಹೆಗೆ ಕರೆದುಕೊಂಡು ಹೋಗುತ್ತೇವೆ!  ಅವರಲ್ಲಿ ಎಷ್ಟು ಜನರಿಗೆ ನಿನ್ನ ಬಗ್ಗೆ ತಿಳಿದಿರಬಹುದು ಎಂಬುದು ಸಲ್ಲದ ವಿಚಾರ.  ಅದರ ಗೊಡವೆ ಏಕೆ? ತಿಳಿದಿರದಿದ್ದರೂ, ಗುಹೆಗಳನ್ನು ನೋಡಿ ಆನಂದಿಸಬಹುದಲ್ಲವೆ?

“ಯಾರೋ ಇಲ್ಲಿ ತಪಸ್ಸು ಮಾಡಿದರಂತೆ” 

“ಯಾರಂತೆ?” “ಯಾಕಂತೆ?”

“ಯಾವೋನಿಗ್ಗೊತ್ತು! ಯಾವ್ದೋ ಭಕ್ತೆನಂತೆ!”

“ಎಲ್ಲ ಬಿಟ್ಟು ಇಲ್ಲಿಗೆ ಬಂದು ಮಾಡಿದ್ಳಂತ?!! ಸರಿ ಹೋಯ್ತು!”

ಇವರನ್ನ ರಮಿಸಲು ನಿನ್ನ ಕಥೆಯನ್ನ ಹೇಳಿದರೆ ಏನು ಪ್ರಯೋಜನ? ಅದಕ್ಕೇ, ಇವರಿಗೆ ಅಂತಲೆ, ನಾವು “ಶೀಲ ಕೀ ಜವಾನಿ” ಹಾಡನ್ನ ಹಾಕಿ ನೀನು ತಪಸ್ಸು ಮಾಡಿದ ಜಾಗಕ್ಕೆ, ಕರೆದು ಕೊಂಡು ಹೋಗುವುದು. ಕಿವಿ ಗಡಚಿಕ್ಕುವ ಈ ಹಾಡಿನ ಮಧ್ಯೆ, ನಿನ್ನ ಗಿಳಿಗಳು ಮೌನವಾಗಿ ಬಹಳ ವರುಷಗಳೇ ಕಳೆದಿವೆ.  ಅಲ್ಲಿಗೆ ಹೋಗಿ ಪಿಕ್ ನಿಕ್ ಜಾಗದಂತೆ, ತಿಂದು, ಉಂಡು, ಮೋಜು ಮಾಡಿ ಅದರ ನೆನಪಿಗಾಗಿ ಈಗಾಗಲೆ, ಬಹಳ ಪ್ಲಾಸ್ಟಿಕ್ ಕವರ್ ಗಳನ್ನು, ಬಾಟಲ್ ಗಳನ್ನು ನೀನು ನೋಡಬಹುದು.  ಯಾವುದಾದರೂ ಪುಣ್ಯ ಕ್ಷೇತ್ರಕ್ಕೆ ಹೋದರೆ, ಏನಾದರೂ ಬಿಟ್ಟು ಬರಬೇಕೆಂಬ ವಾಡಿಕೆಯಂತೆ. ನಮ್ಮಲ್ಲಿ ವೈರಾಗ್ಯದ ಭಾವ ಸ್ವಲ್ಪವಾದರೂ ಇರಲಿ ಅಂತ ಈ ಒಡಂಬಡಿಕೆ. ಅದಕ್ಕಂತಲೇ ನಾವು ಅವನ್ನೆಲ್ಲ ಅಲ್ಲಿ ಬಿಟ್ಟು ಬರುವುದು! ಇನ್ನು ನಿನ್ನ ಹಾಗೆ ಅರಮನೆಯ ರಾಣಿಯ ಪಟ್ಟ, ಐಷಾರಾಮಿನ ಜೀವನವನ್ನು ಬಿಡುವ ಜಂಜಡ ನಮಗಿಲ್ಲ!  ಇದು ನಮ್ಮ ವೈರಾಗ್ಯದ ಪರಿಧಿ – ಇನ್ನೊಂದು ಅರ್ಥದಲ್ಲಿ – ಆ ಕ್ಷೇತ್ರದ ಪಾಪದ ಪರಿಧಿ.  ಎಲ್ಲಿ ’ಪುಣ್ಯ’ ಎಂಬುದು ಇದೆಯೊ ಅಲ್ಲಿಗೆ ಹೋಗಿ, ಅದನ್ನು ತೆಗೆದುಕೊಂಡು, ನಮ್ಮ ಪಾಪದ ಕಂತೆ ಅಲ್ಲಿ ಬಿಟ್ಟುಬರುವುದು ನಮಗೆ ಜನ್ಮತಃ ಬಂದ ಗುಣ.

ಅದಕ್ಕೆಂದೇ, ನಿನ್ನ ಮಲ್ಲಿಕಾರ್ಜುನನ ದರ್ಶನಕ್ಕೂ ನಾವು ಸಾರಾಸಗಟಾಗಿ, ಲಂಚ ನೀಡಿ ಹೋಗುವುದು.  ಅವನನ್ನು ಮುಟ್ಟುವುದಕ್ಕೆಂದೇ,  ಎಲ್ಲ ನ್ಯಾಯ ನೀತಿಯ ಕಟ್ಟಳೆಗಳನ್ನು ಮೀರಿ, ಮೋಸದಿಂದಲಾದರೂ ಮೊದಲು ನುಗ್ಗುವುದು.  ನೀನು ನಿನ್ನ ಮಲ್ಲಿನಾಥನಿಗಾಗಿ ಏನೇನು ಬಿಡಲಿಲ್ಲ?!!! ಅದೇ  ಹಾದಿಯಲ್ಲಿ ಹೋಗಬೇಕೆಂದಿರುವವರು ನಾವು! ಅದಕ್ಕೆ – ಸಹನೆ, ಭಕ್ತಿ, ನಾಚಿಕೆ, ನ್ಯಾಯ, ಇವುಗಳನ್ನು ಬಿಟ್ಟಿದ್ದೇವೆ!  ಇನ್ನು ಮೋಕ್ಷಕ್ಕೆ ಮೂರೇ ಗೇಣು! 🙂  ಇದೇ ದರ್ಶನಕ್ಕಾಗಿ ಯಾರೋ ಹುಚ್ಚು ಜನರು ಮಧ್ಯ್ರರಾತ್ರಿಯಿಂದಲೂ ಬಂದು ಕಾದಿದ್ದರಂತೆ! ಬುದ್ಧಿ ಇಲ್ಲದವರು!  ನಾವು ದರ್ಶನಕ್ಕೆ ಸರಿಯಾದ ಸಮಯಕ್ಕೆ ಬಂದು, ಸ್ವಲ್ಪ ಹಣ ಸುರಿದು – ಹಣವೇ ಇಲ್ಲದವನ ದರ್ಶನವನ್ನು ಪಡೆದೆವು!  ಮೋಕ್ಷ ಇನ್ನು ನಮಗೆ ಮಾತ್ರ ಸಾಧ್ಯವಲ್ಲವೆ?  ಶ್ರೀಶೈಲದ ಶಿಖರವನ್ನು ನೋಡಿದರೆ ಪುನರ್ಜನ್ಮವಿಲ್ಲವಂತೆ – ಇನ್ನು ಲಂಚ ಕೊಟ್ಟು ದರ್ಶನ ಪಡೆದು, ದೇವರನ್ನು ಸ್ಪರ್ಶಿಸಿದವರು ನಾವು! ನಮಗೆ ’ಬಯಲು’ ಕಟ್ಟಿಟ್ಟ ಬುತ್ತಿ!

ನೀನು ಈಗ ಇರಬೇಕಿತ್ತು ಅಕ್ಕ! ಅಷ್ಟು ದೂರ ಕ್ರಮಿಸುವ ಅಗತ್ಯವಿರಲಿಲ್ಲ!  ಅಲ್ಲಮನೇನಾದರೂ ಪ್ರಶ್ನಿಸಿದ್ದರೆ – ಕಿರುಕುಳ ನೀಡುತ್ತಿದ್ದನೆಂದು ಸೆರೆಮನೆಗೆ ಕಳುಹಿಸಬಹುದಿತ್ತು!  ಜಮ್ಮನೆ ವಾಹನದಲ್ಲಿ ಬಂದು, ಲಂಚ ಕೊಟ್ಟು ನಿನ್ನ ಮಲ್ಲಿಕಾರ್ಜುನನನ್ನು ನೋಡಬಹುದಿತ್ತು!  ನೀನು ಈಗ ಇರಬೇಕಿತ್ತು!  ನಿನ್ನ ಭಕ್ತಿಯ ಹುಚ್ಚು, ಅದರ ಕಿಚ್ಚು – ಇವನ್ನು ಈಗ ನೋಡಬೇಕಿತ್ತು!  ನಿನ್ನ ಶ್ರೀಶೈಲವನ್ನು ನೀನು ಈಗ ನೋಡಬೇಕಿತ್ತು!  ಅಲ್ಲಿ ನಿನ್ನ ಗಿಳಿಗಳಿಲ್ಲ, ಮರಗಳಿಲ್ಲ, ಕದಳಿಯಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ – ಅಲ್ಲಿ ನಿನ್ನ ಚೆನ್ನಮಲ್ಲಿಕಾರ್ಜುನನಿಲ್ಲ!  ನೀನು ಅವನನ್ನು ಹುಡುಕಿಕೊಂಡು ಬಂದ ಹಾಗೆ – ಅವನು ಈಗ ನಿನ್ನನ್ನು ಹುಡುಕಿಕೊಂಡು ಎಲ್ಲೆಲ್ಲಿ ಅಲೆಯುತ್ತಿರುವನೋ……… ಅಲ್ಲಿ ಈಗ ಅವನಿಲ್ಲ….. ಅಲ್ಲಿ ಈಗ ನೀನೂ ಇಲ್ಲ………….

1 comments

    • Sushma rao on August 5, 2013 at 10:29 AM
    • Reply

    how I love your writings…and the sentiments behind them..

Leave a Reply

Your email address will not be published.

Time limit is exhausted. Please reload CAPTCHA.

This site uses Akismet to reduce spam. Learn how your comment data is processed.