ನಾನು ನಾನು ಎಂಬ ನಾನಾ ವಿಕಾರಗಳಲಿ
ನನ್ನದಿದು ನನ್ನದಾಗಬೇಕೆಂಬ ಕಿಚ್ಚಿನಲಿ
ಸುಟ್ಟಿದೆ, ಕರಕಲಾಗಿದೆ, ನೆನಹಾಗಿ ಉಳಿದಿದೆ
ನಾನು ನೀನಾಗಿದ್ದ ದಿವ್ಯ ತೇಜಸ್ಸು!
ಲೋಗರಾಟದ ಸೋಗು ಹಾಕಿ, ಸಾಧನೆಯ ಅಹಮ್ಮಲಿ ಬೀಗಿ
ಆರುವರ್ಣಗಳ ಬಳಿದು, ಅಳಿದು, ತಿಕ್ಕಿ, ತೀಡಿ
ಮಾಸಿದೆ, ಸುಕ್ಕಿದೆ, ತೊಗಲಿದು ಹರಿದಿದೆ
ನೀನಿಟ್ಟಿದ್ದ ನಿರ್ವರ್ಣ, ಅವರ್ಣವಾಗಿದೆ!
ಒಳಗೊಸರುವ ಹರಣ ಹಾಯ್ವ ಕಷ್ಮಲ,
ಹೊರಗೆ ಶುಭ್ರ ಸ್ಫಟಿಕ ನಿರ್ಮಲ –
ಮಾತಿನೊಸಗೆಯಲಿ ಬೈಚಿಟ್ಟ ಕತ್ತಿಯಲಿ ಕಡಿದಿದೆ
ಕೆಡಹಿದೆ ಹಲವಾಗಿ ಹರಡಿದೆ – ನೀಕೊಟ್ಟ ಏಕವನು!
ಸಾಕಿಂದು, ಸಾಕಾಗಿಹುದು ನಾನು ನೀನೆಂಬ ಭೇದ!
ನಾನೆಂದ, ನೀನಾರೆಂದ, ನಾನೇ ಎಂದ ಹುರುಳಿರದ ವಾದ!
ನೀನಾನಾಗಲಿ, ನಾನಿಲ್ಲವಾಗಲಿ, ನಾನೆಲ್ಲವಾಗಲಿ
ನೀನಾನಾದಾಗಿನ ಹೊನಲಿನಲಿ ಪುನರಾತ್ಮ ಉದಯಿಸಲಿ!
-ಪ್ರವೀಣ
You say-I say