ಇಲ್ಲೇ ಎಲ್ಲೋ ಒಡೆದವು ಕೆಲ ಮುತ್ತುಗಳು
ಸಂತಸದಿ ಕಳೆದ ಆ ಗೆಳೆತನದ ಹೊತ್ತುಗಳು
ಕಾಲನ ಎಳೆದಾಟದಲ್ಲಿ ಹರಿದ ನೂಲಿನ ಎಸಳುಗಳು
ಕಣ್ಕವಿದ ಗಾಢಾಂಧಕಾರ, ವಿಸ್ತೃತ ಬಯಲು!
ಪೋಣಿಸಲೆಲ್ಲಿ ಹುಡುಕಲಿ?
ಇಲ್ಲೇ ಎಲ್ಲೋ ಆರಿದವು ಪ್ರೀತಿ ಪ್ರೇಮಗಳ ದೀಪಗಳು
ನಂಬಿಕೆಯ ಬತ್ತಿಯಲಿ ಹೊತ್ತಿಸಿದ ಜ್ಯೋತಿಗಳು
ವಿಧಿ ಹೀರಿದ ತೈಲ, ಒಡೆದ ಹಣತೆಯ ಚೂರುಗಳು
ಭೋರೆಂದು ಘರ್ಜಿಸುತ ಬೀಸುವ ಬಿರುಗಾಳಿ ಸುತ್ತಲು
ಹೊತ್ತಿಸಲೆಲ್ಲಿ ಹೋಗಲಿ?
ಇಲ್ಲೇ ಎಲ್ಲೋ ನಾನು ನನ್ನನ್ನೇ ಮರೆತೆನು
ಇತಿಹಾಸಕೆ ಮುಖ ಮಾಡಿ ವರ್ತಮಾನವ ಹಳೆದೆನು
ಬದುಕಿನ ಬೆದಕಾಟದಿ ಬದುಕುವುದ ತೊರೆದೆನು
ಒಡೆದಿಹುದು ಕನ್ನಡಿ ಬಿಂಬಗಳಪರಿಚಿತ
ಗುರುತಿಸಲೆಲ್ಲಿ ಹೋಗಲಿ?
ಇದಾವ ಜೀವನದ ಪರಿ ಇದಾರ ಜೀವ?
ಹೇಳಲಾಗದೆ ತಾಳಲಾಗದೆ ಮನದಾಳದ ನೋವ!
ಮನದುರಿಯ ಬೇಗೆಯಲಿ ಮೂಕ ಆರ್ತನಾದ
ನಾನಿರುವ ಠಾವಿನಲೆ ನಾನೊಬ್ಬ ಮ್ಲೇಚ್ಛ!
ಬದುಕಲೆಲ್ಲಿ ಹೋಗಲಿ?
– ಪ್ರವೀಣ
You say-I say