ಬಹಳ ವರ್ಷಗಳ ಹಿಂದೆ ಬರೆದಿದ್ದ ಕೆಲವು ಕವನಗಳನ್ನು ಕೆದಕಿ, ಬೆದಕಿ, ಹೊರಗೆ ಹಾಕುತ್ತಿದ್ದೇನೆ. ಬಹಳ ದಿನಗಳಿಂದ, ಕನ್ನಡದಲ್ಲಿ, ಅದರ ಅಂಕಣದಲ್ಲಿ ಏನೂ ಬರೆಯದೆ ಇದ್ದ ಅಪರಾಧಿ ಭಾವವನ್ನು ಸ್ವಲ್ಪ ಶಾಂತವಾಗಿಸಲು ಇದೊಂದು ನೆಪ.
ಇಂದೇಕೆ ಮನದಲ್ಲಿ ಮಾರ್ದನಿಪ ನೀರವತೆ?
ಸಂತೆ ಮಧ್ಯದಿ ಸೂಸಿ ಬಂದಿಹುದು ನಿರ್ಜನತೆ |
ಎಲ್ಲರೂ ಇದ್ದು ಇರದಿರುವಂದದ ಏಕಾಂತ
ಇರುವಿಕೆಯೆ ಸೂಳ್ಪಡೆವ ನವವಾದ ಸಿದ್ಧಾಂತ ||
ಯಾವುದೋ ಒಂದು ನೆನಪಿಂದು ಮರುಕಳಿಸಿ
ತಂದಿಹುದು ಭೂತದ ಆತ್ಮಗಳ ಮೇಳವಿಸಿ |
ಗತದಂಧಕಾರದಲಿ ಮೌನಗಳ ಉಕ್ಕಿನಲಿ
ಬಿಗಿದಿದ್ದ ನೆನಹುಗಳು ಸೇರಿಹವು ಬಾನಿನಲಿ ||
ತೋರ್ವಿಕೆಗೆ ಕಾಣ್ಬ ನಗುವಿನಾ ಸೂರ್ಯ ಇನ್ನಿಲ್ಲ
ಒಂಟಿತನದ ಕಾರ್ಮೋಡ ಕವಿದಿಹುದು ಬಾನೆಲ್ಲ !
ನಯನದ ಕಟ್ಟಳೆಗಳ ಮೀರಿ ಹರಿವ ನೀರು ತಾ ನಿಲಲಿಲ್ಲ.
ಜೊತೆಗಿರುವೆವೆಂದೆಂದು ಹೇಳಿದ್ದೆ ನೀನು…… ಇಂದೇಕೆ ಬಳಿಯಿಲ್ಲ ?
– ಪ್ರವೀಣ
You say-I say