“ಎಲ್ಲ ಮರೆತಿರುವಾಗ….ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ”.. ಕೇಳ್ತಾಯಿದ್ದೆ. ಅದೆಷ್ಟು ಸರ್ತಿ ಈ ಹಾಡು ಕೇಳಿದ್ದೀನೋ, ಲೆಕ್ಕ ಇಟ್ಟಿಲ್ಲ. ಆದರೆ ಪ್ರತೀ ಬಾರೀ ಕೇಳಿದಾಗಲೂ ಹೃದಯ ಭಾರಿ ಆದದ್ದುಂಟು. ಬಾಳಿನಲ್ಲಿ ಎಷ್ಟೋ ಸಂಬಂಧಗಳು ಜೊತೆಯಾಗುತ್ತೆ, ಎಷ್ಟೋ ಕಳಚಿ ಹೋಗುತ್ವೆ, ಆದರೆ ಈ ನೆನಪುಗಳ ಋಣವನ್ನ ಹೆಗಲ ಮೇಲೆ ಹೊರಿಸಿಬಿಟ್ಟು ಹೋಗುತ್ವೆ. ಸಂಬಂಧಗಳೇ ಹೀಗೆ ಅಂತ ಅನ್ಕೊಂಡು ಯಾವುದನ್ನೂ ಅಂಟಿಸಿಕೊಳ್ದೆ ಸುಮ್ನೆ ಇದ್ಬಿಡ್ಬಹುದೇನೋ… ಆದರೆ ಹೃದಯ ಕೇಳ್ಬೇಕಲ್ವ? ಅದಕ್ಕೆ ಈ ನೆನಪುಗಳೂ ಬೇಕು, ಅವು ಕೊಡೋ ಕಹಿ, ಸಿಹಿ ರುಚಿಯೂ ಬೇಕು. ಒಂದನ್ನ ತಗೊಂಡ್ರೆ ಇನ್ನೊಂದು ಫ್ರೀ!
ನೆನಪು ತಾನೆ? ಈ ಋಣದಲ್ಲಿ ಕೆಲವೊಂದನ್ನ ಇಟ್ಕೊಂಡು, ಮಿಕ್ಕಿದ್ದನ್ನ ಮರ್ತುಬಿಟ್ರಾಯ್ತು ಅಂತ ಸಲೀಸಾಗಿ ತಪ್ಪಿಸಿಕೊಳ್ಳೋ ಜಾಯಮಾನ ನಂದು. ಆದರೆ, ಬೆನ್ನು ಹತ್ತಿರೋ ಸಾಲಗಾರರ ಥರ, ಒಂದಲ್ಲ ಒಂದು ಮೂಲೆನಲ್ಲಿ, ಎಲ್ಲೋ ತಿರುವಿನಲ್ಲಿ, ಹಿಡಿದುಬಿಡುತ್ತೆ, ಪುನಃ ಹಿಂದಿನ ಕಡತಗಳನ್ನೆಲ್ಲಾ ತೆರೆದಿಡುತ್ತೆ. ನಾ ಮಾಡಿದ್ದು, ತಾ ಮಾಡಿದ್ದು, ಎಲ್ಲಾ ದಾಖಲೆಗಳೂ ಆಚೆ, ತಕ್ಕಡಿನಲ್ಲಿ ಎರಡನ್ನೂ ಹಾಕಿ, ತಪ್ಪು ಒಪ್ಪುಗಳನ್ನ ಅಳೆಯೋ ಸರದಿ ಆಗ. ತಕ್ಕಡಿ ಸಮನಾಗಿ ಇರೋ ಪ್ರಸಂಗಗಳೇ ಕಡಿಮೆ… ಬಹಳಷ್ಟು ಸರ್ತಿ ಏರುಪೇರು! ಹೀಗೆ ಆದಗಲೇನೇ, ಯಾರು ಯಾರಿಗೆ ಎಷ್ಟೆಷ್ಟು ಲೆಕ್ಕ ಚುತ್ತಾ ಮಾಡ್ಬೇಕು ಅನ್ನೋ ಬಾಬ್ತು ಬರೋದು.
ಬಹಳ ಋಣಗಳು ಹೀಗೇ ಹೆಗಲ ಮೇಲೆ ಹೊತ್ಕೊಂಡ್ರೆ, ಮನುಷ್ಯ ಮುಂದೆ ನಡೆಯೋದಾದ್ರೂ ಹೇಗೆ? ಹಗುರವಾದ ನೆನಪುಗಳು, ಸವಿ ನೆನಪುಗಳು ಬೇಕು… ಅದಕ್ಕೆ ಸಂಬಂಧಗಳು ಹಸನಾಗಿ ಕೂಡಬೇಕು.. ಹೀಗೆ ಕೂಡಬೇಕು ಅಂದ್ರೆ, ಸಂಬಂಧದಲ್ಲಿ ನಾನು ನೀನು ಬಿಟ್ಟು, ನಾವು ಅನ್ನೋದು ಬರ್ಬೇಕು. ಅದು ಎಲ್ಲಾ ಸಂಬಂಧದಲ್ಲಿ ಬರೊಲ್ಲ, ಎಲ್ಲರ ಜೊತೆ ಆಗೊಲ್ಲ. ಹೀಗಾಗಿನೇ, ನೆನಪುಗಳ ಋಣವೆಂಬ ಸೂತಕ ಬಲು ಭಾದೆಗೊಳಿಸುತ್ತೆ… ಇದನ್ನ ಪರಿಹರಿಸೋ ಗುಣದ ’ನಿಧಿ’ ಕೂಡ ನಮ್ಮೊಳಗೇ ಇದೆ!
Apr 02
2 comments
“ನೆನಪುಗಳ ಮಾತು ಮಧುರ…”, “ಸವಿ ನೆನಪುಗಳು ಬೇಕು ಸವಿಯಲೀ ಬದುಕು, ಕಹಿ ನೆನಪು ಸಾಕೊಂದು ಮಾಸಲೀ ಬದುಕು…”- ಇಂಥ ಹಾಡುಗಳು ಸಾಕು ಹಳೆಯ ಗಬ್ಬಡವನೆಬ್ಬಿಸಿ ಮನಸನ್ನು ರಾಡಿಗೊಳಿಸಲಿಕ್ಕೆ. ಮನಸ್ಸು ಮತ್ತು ನೆನಪಿಗಿರೋ ಸಂಬಂಧ ಬಹುಶಃ ಯಾವುದೇ ಮಾನವ ಸಂಬಂಧಗಳನ್ನೂ ಮೀರಿದ್ದು. ಇದನ್ನೂ ಮೀರಿ ನಿಂತೆವಾದರೆ ನಾವು ಸಂತರೇ ಸೈ, ಅಲ್ಲವೇನೋ?
ಇರ್ಲಿ, ಇದೇನು ಇದ್ದಕ್ಕಿದ್ದ ಹಾಗೆ ನೆನಪಿನ ‘ನಿಧಿ’ಯನ್ನು ಕೆದಕಿದ್ದು?
ಹೌದು, ಇದೇ ಹಾಡುಗಳು, ಮನಸ್ಸಿನಲ್ಲಿ ಗುನುಗಿಕೊಳ್ತಿದ್ದೆ. ಮನಸ್ಸನ್ನ ಮೀರಿ ನಿಂತು ಸಂತರೇನೋ ಆಗಬಹುದು, ಆದ್ರೆ, ಈ ನೋವಿನಲ್ಲೂ ಏನೋ ಒಂಥರ.. ಸಿಹಿ ಇದೆ.. ಅಲ್ವ? ನಾವು ಮನುಷ್ಯರು ಅಂತ ತೋರಿಸುತ್ತೆ, ಈ ನೋವು! ಇದನ್ನ ಬಿಡಲೇಬೇಕ ಅನ್ನೋದೂ ಯೋಚನೆ ಮಾಡೋ ವಿಚಾರನೇ!
ನೆನಪಿನ ನಿಧಿ.. ತಾನೇ ತಾನಾಗಿ ತೆಕ್ಕೊಂಡು ಹೊರಗೆ ಬಂತು.. ಅದಕ್ಕೆ ಕಾರಣ ಈಗ್ಲೂ ಗೊತ್ತಿಲ್ಲ! ಅದು ಕಾರಣ, ಸಂದರ್ಭ, ಸಮಯ ನೋಡಿ ಬರುವಷ್ಟು ಸೌಜನ್ಯ ಬೆಳಿಸ್ಕೊಂಡಿಲ್ಲ! 🙁