ಅಲ್ಲಮನನರಸುತ್ತಾ…….

ನೆನೆ ಎಂದರೆ ಏನ ನೆನೆವೆನಯ್ಯ!
ಎನ್ನ ಕಾಯವೇ ಕೈಲಾಸವಾಯಿತ್ತು
ಎನ್ನ ಮನವೇ ಲಿಂಗವಾಯಿತ್ತು
ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ?
ಗುಹೇಶ್ವರ ಲಿಂಗ ಲೀಯವಾಯಿತ್ತು!

“ಮಾತೆಂಬುದು ಜ್ಯೋತಿರ್ಲಿಂಗ” – ಆ ಮಾತು ಅಲ್ಲಮರದಾದರೆ! ಪ್ರಭುದೇವರ ಮಾತೆಲ್ಲ ವಚನ, ವಚನವೆಲ್ಲ ಮಾತು. ಅದೊಂದು ಭೋರ್ಗರೆವ ಮಳೆ ಸುರಿದಂತೆ. ಭವದ ಬರಬರ ಬಿಸಿಲಿನಲ್ಲಿ ಝರ್ಝರಿತವಾದ, ಬರಡಾದ ಮನಸ್ಸಿನ ತುಂಬೆಲ್ಲ ಹರಡಿರುವ ಅಜ್ಞಾನದ ಧೂಳನ್ನು ತೊಳೆದು, ’ಶಿವೋಹಂ’ ಎಂಬ ಸುಜ್ಞಾನದ, ಸ್ವಜ್ಞಾನದ ಗಂಗೆಯಾಗಿ ಹರಿದು, ಹಸಿರಾಗಿಸುವ ಅಮೃತವರ್ಷಿಣಿ!

ಶಾಲಾ ಪಠ್ಯಪುಸ್ತಕಗಳಲ್ಲಿ, ಅಲ್ಲಮರ ವಚನಗಳನ್ನು ಕಬ್ಬಿಣದ ಕಡಲೆ ಎಂತಲೇ ವಿವರಿಸುತ್ತಿದ್ದನ್ನು ಕೇಳಿ ಕೇಳಿ, ಅವರ ಬಗ್ಗೆ, ಅವರ ವಚನಗಳ ಬಗ್ಗೆ ಒಂದು ಬಗೆಯ ಭೀತಿಯನ್ನು ತುಂಬಿಕೊಂಡಿದ್ದ ಮನದಲ್ಲಿ, ಕನ್ನಡ ಹಾಗೂ ವಚನ ಸಾಹಿತ್ಯದ ಬಗೆಗಿನ ಒಲವು ಮೊಳೆತು, ಬೆಳೆಯುತ್ತಿರುವ ಸಂದರ್ಭದಲ್ಲಿ ನನ್ನ ಕೈಗೆ, ದೈವ ಕೃಪೆಯೆಂಬಂತೆ “ಶೂನ್ಯಸಂಪಾದನೆ” ದೊರೆಯಿತು. ಮೊದಲನೆಯ ಓದಿನಲ್ಲಿ ಅಷ್ಟಾಗಿ ಅರ್ಥವಾಗದಿದ್ದರೂ, ಕಥೆಯ ಹಂದರ ಮನಸ್ಸಿಗೆ ಮುಟ್ಟಿತು. ಪುನಃ ಪುನಃ ಓದುತ್ತ ಓದುತ್ತ, ಬೆಳಗಿನ ಸೂರ್ಯೋದಯದಂತೆ, ನವುರಾದ, ಹಿತವಾದ ಭಾವ, ಅನುಭಾವ ಹೂ ಅರಳಿದಂತೆ, ಚಿಗುರೊಡೆದಂತೆ ಭಾಸವಾಗುತ್ತ, ಅದರಲ್ಲಿ ಹುದುಗಿದ್ದ ಅಧ್ಯಾತ್ಮದ ಗಣಿ, ತಂತಾನೆ ಪ್ರಕಟವಾಗ ತೊಡಗಿತು. ನಂತರ, ಹಿಂತಿರುಗಿ ನೋಡಿದ್ದೇ ಇಲ್ಲ.

ಚಾಮರಸನ ಪ್ರಭುಲಿಂಗ ಲೀಲೆ, ಹರಿಹರನ ಪ್ರಭುದೇವರ ರಗಳೆ – ಇವೆಲ್ಲವನ್ನು ಓದುತ್ತ, ಅಲ್ಲಮರ ಬಗೆಗಿನ ಒಲವು, ಭಕ್ತಿ, ಹೆಮ್ಮರವಾಗಿ ಬೆಳೆದು ಬಿಟ್ಟಿತು. ಇವರ ಜಾಡನ್ನು ಹುಡುಕುತ್ತ ಹೋಗುವ ಹಂಬಲ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತು. ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಮಧುಕೇಶ್ವರ ದೇವಾಲಯದ ವರ್ಣನೆ, ಶಿವಮೊಗ್ಗೆಯ ಶಿಕಾರಿಪುರದ ಬಳಿಯಲ್ಲಿ ಅಲ್ಲಮರು ಹುಟ್ಟಿದ ಸ್ಥಳದ ವಿವರಗಳು – ಇವೆಲ್ಲ ನನ್ನ ಮನಸ್ಸಿನಲ್ಲಿ ತೀರ್ಥಕ್ಷೇತ್ರಗಳಾಗಿ ಬಿಟ್ಟಿದ್ದವು.

ಅಂತೂ ಇಂತೂ ಶಿವಮೊಗ್ಗೆಗೆ ಲಗ್ಗೆ ಇಟ್ಟದ್ದಾಯಿತು – ಮಧುಕೇಶ್ವರ ದೇವಾಲಯದಲ್ಲಿ ನಿಂತಾಗ, ಇಲ್ಲಿ ಅಲ್ಲಮರು ಮದ್ದಲೆ ಬಾರಿಸಿದ ಬಗೆಗೆ ಐತಿಹ್ಯ ಇರದಿದ್ದರೂ, ಚಾಮರಸನಿಗೆ, ಅಲ್ಲಿ ಅದರ ಅನುಭೂತಿ ಆದದ್ದರ ಬಗ್ಗೆ ಲವಲೇಶವೂ ಸಂದೇಹ ಮೂಡಲಿಲ್ಲ. ವಾಗ್ಮಯವನ್ನೇ ತನ್ನ ಡಮರುಗದ ನಾದದಿಂದ ಸೃಷ್ಟಿಸಿದ ನಟರಾಜನ ಲೀಲಾಸ್ವರೂಪರಾದ ಅಲ್ಲಮರಿಗೆ, ಮದ್ದಲೆ ಆಟಿಕೆಯಾಗಿದ್ದಿರಬೇಕು. ಮಾಯೆಯನ್ನೇ ಆಡಿಸಿದವನಿಗೆ, ಮದ್ದಲೆ ಅಸಾಧ್ಯವೆ?

ಅಲ್ಲಮರನ್ನು ಅರಿಯಲು ಅವರನ್ನು ಮೊದಲು ಅರಸ ಬೇಕಾಯಿತು! ಅವರು ಓಡಾಡಿದ ನೆಲದಲ್ಲಿ ಕಾಲಿರಿಸ ಬೇಕಾಯಿತು….ಅವರ ಅನುಭಾವದ ಹೊಳಹಿನ ಒಂದು ಕಣವಾದರೂ ನನ್ನ ಮನದಲ್ಲಿ ಮೂಡಬೇಕಾಯಿತು….ಅವರನ್ನು ಅವರ ವಚನಗಳಲ್ಲಿ, ಅವರ ನೆಲದಲ್ಲಿ, ಅವರ ದೇಗುಲಗಳಲ್ಲಿ ಹುಡುಕಬೇಕಾಯಿತು. ಕಟ್ಟ ಕಡೆಯಲ್ಲಿ, ಅಲ್ಲಮರನ್ನು ಅರಿಯಲು, ನನ್ನನ್ನೇ ಅರಿಯುವುದು ಅನಿವಾರ್ಯವೆಂಬುದೂ ಮನದಟ್ಟಾಯಿತು. ಇದು ಜೀವಮಾನದ ಪ್ರಯತ್ನ.

ಬಹುಶಃ ಅದಕ್ಕೆಂದೇ ನಾಲ್ಕು ವರ್ಷಗಳ ಹಿಂದೆ ಬರೆಯಲು ಶುರು ಮಾಡಿದ್ದ ಪುಸ್ಕತ, ಇನ್ನೂ ೫ ಪುಟಗಳನ್ನು ಮೀರಿಲ್ಲ. ಅಲ್ಲಮರನ್ನು ಅರಸುವ ಪ್ರಯತ್ನ ನಿಲ್ಲಿಸುವ ಮಾತಂತು ಇಲ್ಲ, ಈ ಪುಟಗಳಿಗೆ ಮತ್ತೆ ಜೀವ ತುಂಬುವ ಆಸೆಯಂತೂ ನಿಚ್ಚಲವಾಗಿಯೇ ಉಳಿದಿದೆ. ಈಗ ಮತ್ತೊಮ್ಮೆ ಪುಸ್ತಕದ ಪುಟಗಳನ್ನು ತಿರುವುತ್ತಿದ್ದೇನೆ….ಮನಸ್ಸಿನಲ್ಲಿ ಒಡಮೂಡಿರುವ ಆಲೋಚನೆಗಳಿಗೆ ಹೊಸ ನೆಲೆ ಕಟ್ಟುತ್ತಿದ್ದೇನೆ.

Leave a Reply

Your email address will not be published.

Time limit is exhausted. Please reload CAPTCHA.

This site uses Akismet to reduce spam. Learn how your comment data is processed.