ಕರ್ನಾಟಕ ರಾಜಕೀಯ ಪರಿಸ್ಥಿತಿ ಹದಗೆಟ್ಟು ಹೋಗಿರುವುದು ಹಳೆಯ ಸುದ್ದಿ. ಕೊಳೆತ ಶವಗಳ ದುರ್ನಾತವನ್ನು ನಾಚಿಸುವಷ್ಟು ಅವಹೇಳನಕಾರಿಯಾದಂಥ ಬೆಳವಣಿಗೆಗಳು ದಿನೇ ದಿನೇ ಎದುರಾಗುತ್ತಿವೆ. ದೇಶದ ಎದುರಿಗೆ ಮಾನ ಕಳೆದುಕೊಂಡು, ತಲೆ ತಗ್ಗಿಸುವಂಥ ಪರಿಸ್ಥಿತಿಯನ್ನು ತಂದು ಕೊಟ್ಟಿದ್ದಾರೆ, ನಮ್ಮ ರಾಜಕೀಯ ಮುಖಂಡರು. ದೇಶಕ್ಕೇ ಭ್ರಷ್ಟಾಚಾರದ ಗೆದ್ದಲು ಹಿಡಿದಿರುವಾಗ, ಮನೆಯೊಳಗೆ, ಮನೆಯೊಡೆಯನನಿದ್ದಾನೋ ಇಲ್ಲವೋ ಎಂದು ತಿಳಿಯಲು ಹೆಚ್ಚು ಶ್ರಮ ಪಡಬೇಕಿಲ್ಲ. ಹೀಗಿರಬೇಕಾದರೆ, ಈ ರಾಜಕೀಯ ದೊಂಬರಾಟದಲ್ಲಿ ಇನ್ನೊಂದಷ್ಟು ಪಾತ್ರಗಳ ಸೇರ್ಪಡೆ. ದಯವಿಟ್ಟು ಸ್ವಾಗತಿಸಿ ವೀರಶೈವ ಮಠಾಧೀಶರನ್ನು!
ಕರ್ನಾಟಕ ರಾಜಕೀಯದ ಬೆಳವಣಿಗೆಗಳನ್ನು ಗಮನಿಸಿದರೆ, ಕನ್ನಡಿಗರ ಈಗಿನ ಪರಿಸ್ಥಿತಿಗೆ ಸ್ಫುಟವಾಗಿ ಹಿಡಿದಿರುವ ಕನ್ನಡಿಯಂತಿದೆ. ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೆ, ಯಡಿಯೂರಪ್ಪನವರ ಹುಚ್ಚು ಮುಂಡೆ ಮದುವೆಯಲ್ಲಿ ತಿಂದು ತೇಗುತ್ತಿರುವವರು ಬಹಳಷ್ಟು ಮಂದಿ, ಸ್ವತಃ ಯಡಿಯೂರಪ್ಪ ಕೂಡ! ಮೊಟ್ಟ ಮೊದಲ ಬಾರಿಗೆ ಅಧಿಕಾರ ಸಿಕ್ಕರೆ, ಮನುಷ್ಯನ ಒಳಗಿರುವ ಕುರುಡು ಮೋಹ, ವ್ಯಾಮೋಹ, ದರ್ಪ, ದುರಹಂಕಾರಗಳೆಲ್ಲ ಹೇಗೆ ಬುಸುಗುಟ್ಟು ಹೆಡೆಬಿಚ್ಚುತ್ತವೆ ಎನ್ನುವುದಕ್ಕೆ, ಯೆಡ್ಡಿ ಹಾಗು ಅವರ ಪಾಳೆಯ ಒಂದು ಜೀವಂತ ನಿದರ್ಶನ. ಕಣ್ಣಿರುವ ಕುರುಡ ಧೃತರಾಷ್ಟ್ರ ಯೆಡಿಯೂರಪ್ಪ. ಅಧಿಕಾರಕ್ಕೆ ಬಂದಂದಿನಿಂದಲೂ, ಕೇವಲ ಅವರಿವರ ಬಯಕೆಗಳನ್ನು, ವಿದ್ರೋಹಗಳನ್ನು ನಿಭಾಯಿಸುವಲ್ಲೇ ತಲ್ಲೀನರಾಗಿರುವ ಇವರ ಆಡಳಿತ ವೈಖರಿ, ನಪುಂಸಕತೆಯನ್ನು ದ್ಯೋತಿಸುತ್ತದೆ ಎಂದರೆ ಅತಿಶಯೋಕ್ತಿ ಎನಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಬಾರಿ, ಖುರ್ಚಿಯನ್ನು ಉಳಿಸಿಕೊಳ್ಳುವುದರಲ್ಲೇ ಅಧಿಕಾರಾವಧಿಯ ಬಹಳಷ್ಟು ಸಮಯವನ್ನು ಕಳೆದಿರುವ ಮಹಾಶಯರು, ಇತ್ತೀಚಿನ ಬೆಳವಣಿಗೆಯಲ್ಲಿ ತೋರಿಸಿರುವ ಭಂಡತನ, ಹೇಸಿಗೆ ಹುಟ್ಟಿಸುವಂತಿದೆ.
ಜಾತ್ಯಾತೀತತೆಯನ್ನು ಮೆರೆಯುತ್ತೇನೆ ಎಂದು ಕೊಚ್ಚಿಕೊಳ್ಳುವ ಇವರು, ತಮ್ಮ ಅಧಿಕಾರಕ್ಕಾಗಿ ಮಠಾಧಿಪತಿಗಳ ಮೊರೆ ಹೊಕ್ಕು, ಅವರ ಮುಖಾಂತರ, ಜಾತಿಯ ಮಾತನ್ನು ಬೀದಿಗೆ ತಂದಿರುವುದು ಭಯಾನಕ ಬೆಳವಣಿಗೆ. ಅದಕ್ಕೆ ತಕ್ಕಂತೆ, ಕುಣಿಯುತ್ತಿರುವ ಈ ಲಿಂಗಾಯತ ಮಠಾಧಿಪತಿಗಳ ಜಾಯಮಾನದ ಬಗ್ಗೆ ಮಾತಾಡಲೂ ಮನಸ್ಸು ಬರುತ್ತಿಲ್ಲ. ನಿಜವಾಗಿ ಹೇಳಬೇಕೆಂದರೆ, ಇವರಲ್ಲಿ ಯಾರೊಬ್ಬರೂ ಲಿಂಗಾಯತ ಸಿದ್ಧಾಂತಗಳ, ಅದರ ಆದರ್ಶಗಳ ಗಾಳಿಯನ್ನೂ ಸೇವಿಸಿದವರಲ್ಲ. ಇದೇ ಪಂಗಡಕ್ಕೆ ಸೇರಿದ ನನಗೆ, ನಾನು ಲಿಂಗಾಯತ ಎಂದು ಹೇಳಿಕೊಳ್ಳಲೂ ನಾಚಿಕೆಯಾಗುವಂತೆ ಪರಿಸ್ಥಿತಿ ನಿರ್ಮಾಣ ಮಾಡಿರುವ ಇವರಿಗೆ, ಯಾವ ಮಾತಿನಲ್ಲಿ ಲೇವಡಿ ಮಾಡಬೇಕು ತಿಳಿಯುತ್ತಿಲ್ಲ!
ಮೂಲತಃ ಬಸವಣ್ಣನವರ ತತ್ವಾಧಾರದ ಮೇಲೆ ರೂಪುಗೊಂಡ ಲಿಂಗಾಯತ ಸಮಾಜ, ದಾಸೋಹವಾಗಲಿ, ಗುರು, ಲಿಂಗ, ಜಂಗಮದ ಮೂಲ ತತ್ವಗಳನ್ನಾಗಲಿ, ಎಲ್ಲೂ ಸ್ಥಿರತೆಯಿಂದ ಪಾಲಿಸುತ್ತಿರುವುದು ಕಂಡು ಬರುತ್ತಿಲ್ಲ. ಮಾಡುತ್ತಿದ್ದರೂ, ಎಲ್ಲೋ ಕೆಲವರು ಮಾತ್ರ, ಎಲೆ ಮರೆಯ ಕಾಯಿಯಂತೆ. ಆದರೆ, ಸಮಾಜದ ಗಣ್ಯರು ಎಂದೆನಿಕೊಳ್ಳುವ ಈ ಮಠಾಧಿಪತಿಗಳ ನಿಜ ಸ್ವರೂಪ ಈ ದಿನಗಳಲ್ಲಿ ಬೆಳಕಿಗೆ ಬಂದಿರುವುದಂತೂ ನಿಜ. ಬೆಳವಣಿಗೆಯ ಹೆಸರಿನಲ್ಲಿ ಮುಖ್ಯಮಂತ್ರಿಗಳನ್ನು ಉಚ್ಛಾಟಿಸಬಾರದು ಎಂದು ಭೋದಿಸುತ್ತಿರುವ ಈ ನರಿ ಜಾತಿಯ ’ಗುರು’ಗಳು, ಯಾರ ಬೆಳವಣಿಗೆಯನ್ನುವುದನ್ನು ಸ್ಪಷ್ಟಪಡಿಸುತ್ತಿಲ್ಲ. ಅದನ್ನು ಸೂಚಿಸ ಬೇಕಾದ ಅಗತ್ಯವೂ ಇಲ್ಲ. ರೋಸ್ವುಡ್ ಸಿಂಹಾಸನದ ಮೇಲೆ, ಹಂಸ ತೂಲಿಕಾಕಲ್ಪದಲ್ಲಿ ಕುಳಿತು, ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುವ ಈ ಮತಾಧೀಶರು ಹೇಳುವ ಬೆಳವಣಿಗೆ ಯಾವುದೆಂದು ಎಲ್ಲರಿಗೂ ತಿಳಿಯಬಹುದಾದ ವಿಷಯವೆ.
ಭಕ್ತಿಯ ಭಂಡಾರದ ಬಸವಣ್ಣ ಎಲ್ಲಿ? ಅವರು ಸ್ಥಾಪಿಸಿದ ಆದರ್ಶದ ಕೊಲೆ ಮಾಡಿ, ಅದರ ತಿಥಿ ಊಟದಲ್ಲಿ ತಿಂದು ಕುಣಿದು ಕುಪ್ಪಳಿಸುತ್ತಿರುವ ಈ ಹೇಡಿಗಳೆಲ್ಲಿ? ತಮ್ಮ ವ್ಯಕ್ತಿತ್ವಕ್ಕೆ ಬೊಟ್ಟು ಮಾಡಿದ ರಾಜನ ಹಂಗನ್ನು ತೊರೆದು, ಅಧಿಕಾರವನ್ನು ಕಿತ್ತೊಗೆದು, ಹೊರಗೆ ನಡೆದವರು ಬಸವಣ್ಣನವರು, ಅದು ಕಲ್ಯಾಣದ ಕ್ರಾಂತಿ! ಮಾನಕ್ಕಿಂತ ಮಿಗಿಲಾದ ಧನವಿಲ್ಲವೆಂದು, ಕಾಯಕವೇ ಕೈಲಾಸವೆಂದು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು ಎಂದು, ನುಡಿಯೊಳಗಾಗಿ ನಡೆದರು ಬಸವಣ್ಣನವರು. ಆದರೆ, ಈ ಲಿಂಗಾಯತ ಮತಾಧೀಶರು, ರಾಜಕೀಯ ’ಗಣ್ಯ’ರು, ಅವರ ಹೆಸರಿನಲ್ಲಿ ಒಂದು ಇಡೀ ರಾಜ್ಯದ ಜನತೆಯನ್ನೇ ಅಧೋಗತಿಗೆ ಒಯ್ಯುತ್ತಿರುವ ಶೂರರು. ಇದು ಇಂದಿನ ಕರ್ನಾಟಕದ ಕ್ರಾಂತಿ! ಅಂದು ಬಿಜ್ಜಳನ, ಅನೇಕ ಶರಣರ ರಕ್ತ ಹರಿದಿತ್ತು, ಇಂದು, ಕೋಟ್ಯಾಂತರ ಜನರ ರಕ್ತ ಹರಿಯುತ್ತಿದ್ದೆ! ನನ್ನದು ಕುದಿಯುತ್ತಿದೆ.
ಈ ಎಲ್ಲ ನಾಟಕದ ಅಂತ್ಯದಲ್ಲಿ ಎಂದಿನಂತೆ, ರಾಯರು ಬೆಳವಣಿಗೆಯ ಬೊಗಳೆಯನ್ನು ನಾಚಿಕೆಯಿಲ್ಲದೆ ಬೊಗಳಿದರು. ಪ್ರವಾಹ ಸಂತ್ರಸ್ತರ ಗತಿಯನ್ನೇ ಸುಧಾರಿಸದ ಇವರ ಪೌರುಷಕ್ಕೆ ತಲೆ ಬಾಗಿದೆ ಘನ ಹೈಕಮಾಂಡ್! ಬಸವಣ್ಣನವರ ವಚನದಲ್ಲಿ ಅವರೇ ಹೇಳುವಂತೆ, ಹೊರೆಸಿಕೊಂಬುವ ನಾಯಿ ಮೊಲನೇನ ಹಿಡಿಯುವುದು? ಮಠಾಧೀಶರು, ರಾಜಕೀಯ ಮುಖಂಡರು, ಈ ವರ್ಗದ ನಾಯಿಗಳೇನೋ ಹೌದು, ಇವರನ್ನು ಹೊತ್ತಿರುವ ನತಧೃಷ್ಟ ಮೂರ್ಖರು ನಾವೇ ಎನ್ನುವುದು ನಮಗೇಕೋ ಇನ್ನೂ ಅರಿವಿಗೆ ಬಂದಿಲ್ಲ!
ಶುಭಾಶಯಗಳು ಯಡಿಯೂರಪ್ಪನವರಿಗೆ!
You say-I say