ಮನುಷ್ಯ ತನ್ನನ್ನ ತಾನೇ ಎಷ್ಟೇ ಹೊಗಳಿಕೊಂಡ್ರೂ, ಪ್ರಕೃತಿಗೆ ಬಹುಶಃ ಮನುಷ್ಯನನ್ನ ಲೇವಡಿ ಮಾಡೋ ಆಸೆ ಇತ್ತೋ ಏನೋ ಕಾಣೆ! ದ.ರಾ.ಬೇಂದ್ರೆ ಅವರು ಹೇಳೋ ಹಾಗೇ… ನಮಗೆ ಮಾತ್ರ ಒಂದೇ ಒಂದು ಜನ್ಮ, ಅದರಲ್ಲೂ, ಒಂದೇ ಬಾಲ್ಯ, ಒಂದೇ ಹರೆಯ, … ಆದರೆ ಪ್ರಕೃತಿಯಲ್ಲಿ ಹಾಸು ಹೊಕ್ಕಾಗಿರೋ ಗಿಡ ಮರಗಳಿಗೆಲ್ಲ..? ಯುಗ ಯುಗಾದಿ ಕಳೆದರೂ, ಮರಳಿ ಬರೋ ಯುಗಾದಿಯ ಕೊಡುಗೆ! ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆ.. ಇವರಿಗೆಲ್ಲ! ವಸಂತನ ಆಗಮನವಾಗಿ ಎಲ್ಲ ಹೊಂಗೆ ತೊಂಗೆಯಲ್ಲಿ ಸಂತಸ ತುಂಬಿ ನಲಿಯುವ ಯುಗಾದಿ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಬರ್ತಾಯಿದೆ. ಇಡೀ ಸೃಷ್ಟಿ ನವನವೋಲ್ಲಾಸದಿಂದ ಕಂಗೊಳಿಸ್ತಾಯಿದ್ರೆ, ಮನುಷ್ಯ, ನಕ್ಷತ್ರಗಳನ್ನ, ಗ್ರಹಗಳನ್ನ, ಲೆಕ್ಕ ಹಾಕಿ ಬರೋ ವರ್ಷದ ಫಲದಲ್ಲಿ ಮೈ ಮರೆತಿರ್ತಾನೆ!
ಪಂಚಾಂಗ, ಜಾತಕಗಳೆಲ್ಲ ಹೊರಗೆ ಬಂದಿರುತ್ತೆ… ಜೊತೆಗೆ, ಎಲ್ಲ ಜ್ಯೋತಿಷ್ಯರ ಮನೆ ಮುಂದೆ ಸರತಿಯ ಸಾಲು. ಈಗೀಗ ಅದಿಲ್ಲ ಬಿಡಿ, ಎಲ್ಲ ಚಾನೆಲ್ನಲ್ಲಿ ಬರುತ್ತೆಲ್ಲ… ಅಲ್ಲಿಗೆ ಫೋನ್ ಮಾಡಿದ್ರೆ ಕಥೆ ಮುಗೀತು! ಮರಗಳಿಗೆ ಇದರ ಚಿಂತೆ ಇದೆಯೆ? ಮನುಷ್ಯ ತನ್ನ ಬಗ್ಗೆ ತಾನೇ ಅದೆಷ್ಟೇ ಬೀಗಿದ್ರೂ, ಪ್ರಕೃತಿಯ ಮುಂದೆ ಅದೆಷ್ಟು ಕುಬ್ಜ ಆಗ್ಬಿಡ್ತಾನೆ ಅಲ್ವ? ಆಯಾ ಮಾಸಕ್ಕೆ, ಆಯಾ ಋತುವಿಗೆ ಅನುಗುಣವಾಗಿ ಎಲ್ಲವೂ ನಡೆಯುತ್ವೆ! ಮನುಷ್ಯನನ್ನ ಬಿಟ್ಟು! ಬೇಸಿಗೆಯಲ್ಲಿ, ಚಳಿಯನ್ನ, ಚಳಿಗಾಲದಲ್ಲಿ ಬಿಸಿಲನ್ನ ಬಯಸೋ ವಿಚಿತ್ರ ಪ್ರಾಣಿ ಅಂದ್ರೆ ಮನುಷ್ಯ ಒಬ್ನೇ! ಕಷ್ಟ ಬಂದಾಗ ಸುಖ ಬಯಸ್ತೀವಿ, ಸುಖ ಬಂದಾಗ, ಮತ್ತಷ್ಟೂ ಹೆಚ್ಚು ಸುಖ. ನಮ್ಮ ಮನಸ್ಸಿಗೆ ಒಪ್ಪಿಗೆ ಆಗೋದೊಂದೇ ಒಳ್ಳೇದು, ಮಿಕ್ಕಿದ್ದೆಲ್ಲಾ ಕೆಟ್ಟದ್ದು! ಪ್ರಕೃತಿನಲ್ಲಿ ಎಲ್ಲಕ್ಕೂ ಸ್ಥಾನ ಇದೆ. ಅದು ಒಳ್ಳೇದು ಕೆಟ್ಟದ್ದು ಅನ್ನೋ ತುಲನೆ ಮಾಡೊಲ್ಲ! ನಿಜವಾದ ನಿರ್ಗುಣೆ! ದಿಟವಾಗಿ ಸ್ಥಿತಪ್ರಜ್ಞೆ! ಯುಗಾದಿಯ ಮಹತ್ವ ಕೂಡ ಇದರಲ್ಲೇ ಅಡಗಿರೋದು! ಬೇವು ಬೆಲ್ಲ… ಜೊತೆಯಾಗಿ ಸವಿಬೇಕು. ಕಷ್ಟ ಸುಖ ಜೊತೆಯಾಗಿ ಸಮನಾಗೆ ಸ್ವೀಕರಿಸಬೇಕು. ಯುಗಾದಿ ಬಂದಾಗ ಪ್ರಕೃತಿಯೊಂದೇ ಅಲ್ಲ, ಮನುಷ್ಯ ಸಹಿತ ಮನಸ್ಸಿನಲ್ಲಿ ಪುನಃ ಹೊಸದಾದ ಜೀವನವನ್ನ ಪಡೀಬೇಕು! ಕಷ್ಟ ಬಂದಾಗ ಕುಗ್ಗದೆ, ಪುನಃ ಬರುವ ವಸಂತನ ಆಗಮನಕ್ಕೆ ಕಾದಿದ್ದು, ಸಂತೃಪ್ತಿಯ ಕಾಲ ಕೂಡಿಬಂದಾಗ, ಚಿಗುರೊಡೆದು ಜೀವನವನ್ನ ಸಿಂಗರಿಸಿಕೊಳ್ಳಬೇಕು! ಆ ವಸಂತನ ಆಗಮನಕ್ಕೆ ಚಳಿಗಾಲ ಇರಲೇ ಬೇಕಲ್ಲವೆ? ದಿನ ನಿತ್ಯವೂ ಯುಗಾದಿ ಆದಾಗ, ನಿತ್ಯೋತ್ಸವ ಆಗುತ್ತೆ! ಅದು ಮನುಷ್ಯನೊಳಗಿನ ದೈವ್ಯಕ್ಕೆ ನಿತ್ಯೋತ್ಸವ! ಇದೂ ಯುಗಾದಿಯ ಸಂದೇಶವೇ!
2 comments
ಅಂತೂ ಯುಗಾದಿಯ ನೆಪದಲ್ಲಿ ನಾಲ್ಕಕ್ಷರ ಟಕಟಕಿಸಿದ್ದಿ ಅಂತಾಯ್ತು.
ಯುಗಾದಿ ನಿಮ್ಮ ಮನೆಮನಗಳಿಗೆ ವಸಂತದ ಹರುಷವನ್ನೂ ಹೊಸತನದ ಹುರುಪನ್ನೂ ತುಂಬಲಿ.
“ಸ್ಥಿತಪ್ರಗ್ಞೆ” – ಸ್ಥಿತಪ್ರಜ್ಞೆ ಆಗಬೇಕು.
ಸರಿ ಮಾಡಿದೆ… ಅದಕ್ಕೆ ಸರಿಯಾದ ಕೀಲಿ ಕೈ ಸಿಕ್ಕಿರಲಿಲ್ಲ… ಈಗ ಸರಿ ಮಾಡಿದೆ!! ಯುಗಾದಿ ಹಬ್ಬ ಆಚರಣೆ ಜೋರಾಗಿತ್ತೋ?